ಅಪ್ಪಯ್ಯ ದೀಕ್ಷಿತIi jqlqh e lAa rcet

ತಂಜಾವೂರುಜಿಲ್ಲೆಯಲ್ಲಿರುವ ಅಪ್ಪಯ್ಯ ದೀಕ್ಷಿತರ ಸಮಾಧಿ

ಅಪ್ಪಯ್ಯ ದೀಕ್ಷಿತ (ಸು. 1554-1626) ಸರ್ವತೋಮುಖವಾದ ಪ್ರತಿಭೆ ಪಾಂಡಿತ್ಯಗಳಿಗೂ ದೈವಭಕ್ತಿಗೂ ಹೆಸರುವಾಸಿಯಾದ ಈತ ತಮಿಳುನಾಡಿನ ಕಂಚಿಯ ಸಮೀಪದ ಅಡಯಪ್ಪಲಮ್ ಎಂಬ ಗ್ರಾಮದಲ್ಲಿ ವಿದ್ವಾಂಸರ ವಂಶದಲ್ಲಿ ಜನಿಸಿದ. ಅವನ ತಾತ ಆಚಾರ್ಯ ದೀಕ್ಷಿತ ವಿಜಯನಗರದ ಕೃಷ್ಣದೇವರಾಯನಿಂದ ಪೋಷಿತನಾಗಿದ್ದು ಅಚ್ಚಾನ್ ದೀಕ್ಷಿತ ಎಂದು ಹೆಸರಾಗಿದ್ದ. ಅಚ್ಚಾನ್ ಎಂಬುದು ಆಚಾರ್ಯ ಪದದ ತಮಿಳು ರೂಪ.

ಪರಿವಿಡಿ

  • ಕಾಲ
  • ಸಂಸಾರಿಕ ಜೀವನ
  • ಗ್ರಂಥಗಳು
  • ಗ್ರಂಥ ವಿಮರ್ಶೆ
  • ವ್ಯಕ್ತಿತ್ವ
  • ಬಾಹ್ಯ ಸಂಪರ್ಕಗಳು

ಕಾಲ[ಬದಲಾಯಿಸಿ]

ಅಪ್ಪಯ್ಯ ದೀಕ್ಷಿತನ ಕಾಲದ ವಿಚಾರದಲ್ಲಿ ವಿವಾದವಿದೆ. ಆತ ಕ್ರಿ.ಶ. 1554-1626 ರವರೆಗೆ ಜೀವಿಸಿದ್ದನೆಂಬುದು ಸಾಮಾನ್ಯವಾಗಿ ವಿದ್ವಾಂಸರ ಒಪ್ಪಿಗೆ ಪಡೆದಿರುವ ಅಭಿಪ್ರಾಯ. ಇದಕ್ಕೆ ವಿಜಯನಗರದ ಎರಡನೆಯ ಶ್ರಿರಂಗರಾಯನ ಒಂದು ಶಾಸನದ ಆಧಾರವಿದೆ. ಆದರೆ ಅಪ್ಪಯ್ಯ ದೀಕ್ಷಿತನ ವಂಶಜರೇ ಆದ ವೈ. ಮಹಲಿಂಗಶಾಸ್ತ್ರಿಗಳು ಇವನ ಕಾಲದ ವಿಚಾರದಲ್ಲಿ ಮೇಲ್ಕಂಡ ತೀರ್ಮಾನ ಸರಿಯಲ್ಲವೆಂದು ವಾದಿಸಿದ್ದಾರೆ. ಅಪ್ಪಯ್ಯ ದೀಕ್ಷಿತ ತನ್ನ ಕೆಲವು ಗ್ರಂಥಗಳಲ್ಲಿ ಕಾಣಿಸಿರುವ ಚಿನ್ನತಿಮ್ಮ, ಚಿನ್ನಬೊಮ್ಮ, ವೆಂಕಟ ಎಂಬ ರಾಜರ ಹೆಸರುಗಳನ್ನೂ ದಿಕ್ಷಿತನ ಜನ್ಮಸ್ಥಳವಾದ ಅಡಯಪ್ಪಲಂನ ಕಾಲಕಂಠೇಶ್ವರ ದೇವಾಲಯದಲ್ಲಿನ ಶಿಲಾಶಾಸನವನ್ನೂ ಗಮನದಲ್ಲಿಟ್ಟುಕೊಂಡು ಶಾಸ್ತ್ರಿಗಳು ದೀಕ್ಷಿತನ ಕಾಲವನ್ನು ನಿರ್ಣಯಿಸಿದ್ದಾರೆ. ರಂಗರಾಜ ಪುತ್ರನಾದ ಅಪ್ಪಯ್ಯನಿಂದ ಒಂದು ನೂರು ಗ್ರಂಥಗಳು ರಚಿತವಾದ ಅಂಶವೂ ಚಿನ್ನಬೊಮ್ಮ ಅಪ್ಪಯ್ಯನಿಗೆ ಪೋಷಕ ದೊರೆಯಾಗಿದ್ದ ವಿಚಾರವೂ ಮೇಲ್ಕಂಡ ಶಿಲಾಶಾಸನದಿಂದ (1582) ತಿಳಿದುಬಂದಿವೆ. ಆದರೆ, ಅಪ್ಪಯ್ಯ ದೀಕ್ಷಿತನ ಕಾಲದಿಂದ ಬಹು ಈಚೆಗೆ ಅವನ ಪ್ರಸಿದ್ಧಿಯನ್ನನುಸರಿಸಿ ಶಾಸನ ಹುಟ್ಟಿರಬಹುದೆಂದು ಹೇಳಿ ಕೆಲವು ವಿದ್ವಾಂಸರು ಅದರ ಆಧಾರದ ಮೇಲೆ ಶಾಸ್ತ್ರಿಗಳವರು ಮಾಡಿರುವ ಕಾಲನಿರ್ಣಯವನ್ನು ವಿರೋಧಿಸಿದ್ದಾರೆ. ಅಲ್ಲದೆ, ಅದೇ ವಂಶದಲ್ಲಿ ಅಪ್ಪಯ್ಯ ಎಂಬ ಹೆಸರುಳ್ಳವರು ಮೂರು ಮಂದಿ ಇರುವರೆಂಬ ವಿಷಯವನ್ನೂ ವಿದ್ವಾಂಸರು ಬೆಳಕಿಗೆ ತಂದಿರುವುದರಿಂದ ದೀಕ್ಷಿತರ ಕಾಲವನ್ನು ನಿರ್ಧರಿಸುವುದು ಕಷ್ಟತರವಾಗಿದೆ.

ಸಂಸಾರಿಕ ಜೀವನ[ಬದಲಾಯಿಸಿ]

ಆಚಾರ್ಯ ದೀಕ್ಷಿತನಿಗೆ ಶೈವ ಹಾಗೂ ಶ್ರೀವೈಷ್ಣವ ಪಂಗಡದ ಇಬ್ಬರು ಪತ್ನಿಯರಿದ್ದರು. ಹೀಗಾಗಿ ದೀಕ್ಷಿತನಲ್ಲಿ ಶೈವ ವೈಷ್ಣವ ಮತಗಳು ಸಮನ್ವಯಗೊಂಡಿದ್ದುವು. ಶ್ರೀವೈಷ್ಣವ ಪತ್ನಿಯಲ್ಲಿ ಹುಟ್ಟಿದ ನಾಲ್ವರು ಪುತ್ರರಲ್ಲಿ ಮೊದಲನೆಯವ ಶ್ರೀರಂಗರಾಜಾಧ್ವರಿ. ಈತ ಪ್ರಸಿದ್ಧ ವೇದಾಂತಿ. ಇವನಿಗೆ ಅಪ್ಪ ದೀಕ್ಷಿತ, ಅಚ್ಚಾನ್ ದೀಕ್ಷಿತರೆಂಬ ಇಬ್ಬರು ಮಕ್ಕಳು. ನೀಲಕಂಠವಿಜಯ ಎಂಬ ಚಂಪೂಕಾವ್ಯದ ಕರ್ತೃ ನೀಲಕಂಠ ದೀಕ್ಷಿತ ಅಚ್ಚಾನ್ ದೀಕ್ಷಿತನ ಮೊಮ್ಮಗ. ಶ್ರೀರಂಗರಾಜಾಧ್ವರಿಯ ಜ್ಯೇಷ್ಠಪುತ್ರನ ಹುಟ್ಟುಹೆಸರು ಅಪ್ಪ ದೀಕ್ಷಿತ ಎಂದಾದರೂ ಕಾಲಕ್ರಮದಲ್ಲಿ ಗೌರವ ಕೂಡಿಬಂದಂತೆಲ್ಲ ಅಪ್ಪಯ್ಯ ದೀಕ್ಷಿತ ಎಂಬ ಹೆಸರೇ ರೂಢಿಗೆ ಬಂತು. ಬಾಲ್ಯದಿಂದಲೂ ತಂದೆಯಿಂದ ಅದ್ವೈತ ಮುಂತಾದ ಶಾಸ್ತ್ರಗಳಲ್ಲಿ ಶಿಕ್ಷಣ ಲಭಿಸಿ ವಂಶಕ್ಕನುಗುಣವಾಗಿ ಅವನಲ್ಲಿ ಅದ್ವೈತ ವಿಷಯಿಕವಾದ ಆಸಕ್ತಿ ಬೆಳೆಯಿತು. ಅಲ್ಲದೆ ಅದ್ವೈತದ ಪ್ರಕಾರ ನಿರ್ಗುಣ ಬ್ರಹ್ಮತತ್ತ್ವವನ್ನು ತಂದೆ ಮನದಟ್ಟು ಮಾಡಿಸಿದ್ದರೂ ಅಪ್ಪಯ್ಯನಿಗೆ ಚಿದಚಿತ್ಪ್ರಪಂಚವಿಶಿಷ್ಟನಾದ ಶಿವನ ವಿಚಾರದಲ್ಲಿ ಭಕ್ತಿ ಅಪಾರವಾಗಿ ಬೆಳೆದು ಅವನ ಕೆಲವು ಗ್ರಂಥಗಳಲ್ಲಿ ಹೊರ ಹೊಮ್ಮಿತು. ಕೆಲಕಾಲಾನಂತರ ಅದ್ವೈತಾಚಾರ್ಯನೊಬ್ಬನ ಪ್ರಭಾವದಿಂದ ಅವನ ಮನಸ್ಸು ಅದ್ವೈತದ ಮೂಲತತ್ತ್ಬಗಳ ಕಡೆ ಪುನಃ ಹರಿಯಿತು. ತತ್ಪರಿಣಾಮವಾಗಿ ಆತ ಬರೆದ ಗ್ರಂಥಗಳೆಂದರೆ, ಅದ್ವೈತ ವೇದಾಂತವನ್ನು ಕುರಿತು ವ್ಯಾಖ್ಯಾನ ರೂಪದ ಪರಿಮಳ, ನ್ಯಾಯ ರಕ್ಷಾಮಣಿ, ಸಿದ್ಧಾಂತಲೇಶಸಂಗ್ರಹ-ಮುಂತಾದುವು.

ಗ್ರಂಥಗಳು[ಬದಲಾಯಿಸಿ]

ಅಪ್ಪಯ್ಯ ದೀಕ್ಷಿತ ಸುಮಾರು ನೂರನಾಲ್ಕು ಗ್ರಂಥಗಳ ಕರ್ತೃವೆಂದು ಪ್ರಸಿದ್ಧಿ ಪಡೆದಿದ್ದಾನೆ. ಶ್ರೀಕಂಠಶಿವಾಚಾರ್ಯನ ಬ್ರಹ್ಮಸೂತ್ರ ಭಾಷ್ಯಕ್ಕೆ ವಿವರಣೆಯನ್ನು ಕೊಟ್ಟು ವಿಶಿಷ್ಟಶಿವಾದ್ವೈತವನ್ನು ಸುಂದರವಾಗಿ ವಿವರಿಸಿರುವ ಕೀರ್ತಿ ಈತನದು. ಮೇಲ್ಕಂಡ ಸೂತ್ರ ಭಾಷ್ಯಕ್ಕೆ ವ್ಯಾಖ್ಯಾನರೂಪದಲ್ಲಿರುವ ಶಿವಾರ್ಕಮಣಿದೀಪಿಕಾ, ಶಿವಾದ್ವೈತನಿರ್ಣಯ ಮುಂತಾದ ಗ್ರಂಥಗಳೂ ಶಿವತತ್ತ್ವ ಪ್ರತಿಪಾದನೆಗೆ ಮೀಸಲಾಗಿವೆ. ದೀಕ್ಷಿತ ಶುದ್ಧಾದ್ವೈತದಲ್ಲಿ ದೃಢವಾದ ಚಿತ್ತವೃತ್ತಿಯುಳ್ಳವನು. ಆದರೆ ಅವನ ಹೃದಯ ಶಿವಭಕ್ತಿಯಿಂದ ತುಂಬಿತ್ತು. ಸಗುಣಬ್ರಹ್ಮನಿರೂಪಣೇಯಲ್ಲಿ ಅಭಿರುಚಿಯನ್ನು ಹೊಂದಿದ್ದ ಆತನಿಗೆ ಶಿವಭಕ್ತಿ ವಿಷ್ಣುಭಕ್ತಿಗಳೆರಡರಲ್ಲೂ ಏಕರೂಪವಾದ ಸಹಾನುಭೂತಿ ಶ್ರದ್ಧೆಗಳಿದ್ದುವು. ವೈಷ್ಣವಾಚಾರ್ಯ ಶ್ರೀಮದ್ವೇದಾಂತದೇಶಿಕ ವಿರಚಿತ ಯಾದವಾಭ್ಯುದಯ ಕಾವ್ಯಕ್ಕೆ ಉತ್ತಮವ್ಯಾಖ್ಯಾನವನ್ನು ಬರೆದು ದೀಕ್ಷಿತ ತನ್ನ ವಿಶಾಲಮನೋಭಾವವನ್ನು ವ್ಯಕ್ತಪಡಿಸಿದ್ದಾನೆ. ಆದರೂ ಅವನ ಹೃದಯದ ಒಲವು ಶಿವನ ಕಡೆಗೇ. ಅವನೇ ಹೇಳುವಂತೆ ಅವನಿಗೆ ತರುಣೇಂದುಶೇಖರನಲ್ಲಿ ಅತಿಭಕ್ತಿ (ತಥಾಪಿ ಭಕ್ತಿಸ್ತರುಣೇಂದುಶೇಖರ). ಅದ್ವೈತವೇದಾಂತಕ್ಕೂ ಶೈವಮತಕ್ಕೂ ಸಂಬಂಧಪಟ್ಟ ಗ್ರಂಥಗಳನ್ನೇ ಅಲ್ಲದೆ ದೀಕ್ಷಿತ ಕುವಲಯಾನಂದ, ಚಿತ್ರಮೀಮಾಂಸಾ, ವೃತ್ತಿವಾರ್ತಿಕಾ, ಲಕ್ಷಣರತ್ನಾವಳೀ ಎಂಬ ಅಲಂಕಾರ ಗ್ರಂಥಗಳನ್ನೂ ಯಾದವಾಭ್ಯುದಯಕ್ಕೆ ವ್ಯಾಖ್ಯಾನವನ್ನೂ ರಚಿಸಿದ್ದಾನೆ. ಶಿವಮಹಿಮಕಲ8ಇಕಾಸ್ತುತಿ, ವರದರಾಜಸ್ತವ, ಹರಿಹರಸ್ತುತಿ ಮುಂತಾದ ಸ್ತೋತ್ರಗ್ರಂಥಗಳೂ ಅವನಿಂದ ರಚಿತವಾಗಿವೆ. ಈ ಗ್ರಂಥಗಳಲ್ಲಿ ಕಾಣಬರುವ ವಸ್ತು ಪ್ರತಿಪಾದನೆಯನ್ನು ಗಮನಿಸಿದರೆ ಮೀಮಾಂಸೆ, ವ್ಯಾಕರಣ, ನ್ಯಾಯ-ಮುಂತಾದಶಾಸ್ತ್ರಗಳಲ್ಲಿ ದೀಕ್ಷಿತನಿಗಿದ್ದ ಪ್ರಬುದ್ಧ ಪಾಂಡಿತ್ಯ ಎದ್ದುಕಾಣುತ್ತದೆ. ಹೀಗೆ ದೀಕ್ಷಿತನ ಗ್ರಂಥರಚನೆ ಬಹುಮುಖವಾದದ್ದು.

ಗ್ರಂಥ ವಿಮರ್ಶೆ[ಬದಲಾಯಿಸಿ]

ದೀಕ್ಷಿತನ ಒಂದೆರಡು ಕೃತಿಗಳು ಕಟುವಾದ ಟೀಕೆಗೆ ಗುರಿಯಾಗಿರುವುದೂ ಉಂಟು. ಸುಪ್ರಸಿದ್ಧ ಆಲಂಕಾರಿಕನಾದ ಜಗನ್ನಾಥ (ಸು. 1620-1665) ಅವನನ್ನು ದ್ರವಿಡಪುಂಗವ ಮುಂತಾದ ಲಘುವಾದ ಮಾತುಗಳಿಂದ ನಿರ್ದೇಶಿಸಿ, ಅವನ ಅಲಂಕಾರ ಗ್ರಂಥಗಳಲ್ಲೊಂದನ್ನು ಟೀಕಿಸಲು ಚಿತ್ರಮೀಮಾಂಸಾಖಂಡನ ಎಂಬ ಗ್ರಂಥವನ್ನೇ ಬರೆದಿದ್ದಾನೆ. ಆದರೆ ಜಗನ್ನಾಥನ ತಂದೆಗೆ ಮೀಮಾಂಸಾ ಶಾಸ್ತ್ರದಲ್ಲಿ ಗುರುವಾಗಿದ್ದ ಖಂಡದೇವ ದೀಕ್ಷಿತನನ್ನು ಮೀಮಾಂಸಕಮೂರ್ಧನ್ಯ ಎಂದು ಪ್ರಶಂಸಿಸಿ ಅವನ ಪಾಂಡಿತ್ಯದ ಹಿರಿಮೆಯನ್ನು ಎತ್ತಿಹಿಡಿದಿರುವುದರಿಂದ ಕರ್ತೃವಿನ ಮೇಲಣ ಟೀಕೆಗಳು ಮಹತ್ವಕ್ಕೆ ಪೂರಕಗಳೇ ಹೊರತು ಬಾಧಕಗಳಲ್ಲವೆಂದು ಹೇಳಬಹುದು.

ವ್ಯಕ್ತಿತ್ವ[ಬದಲಾಯಿಸಿ]

ದೀಕ್ಷಿತನ ವ್ಯಕ್ತಿತ್ವದಲ್ಲಿ ಕಾಣಬರುವ ಹೃದಯವೈಶಾಲ್ಯ, ಔದಾರ್ಯ, ಪಾಂಡಿತ್ಯ, ಪ್ರತಿಭೆ, ಜ್ಞಾನಭಕ್ತಿಗಳ ಸಮನ್ವಯ ಅನನುಕರಣೀಯವಾದುವು. ಅವನಲ್ಲಿ ತತ್ತ್ವ ಜ್ಞಾನಿಯ ಬುದ್ಧಿ ಸೂಕ್ಷ್ಮತೆಯೂ ಭಕ್ತಾಗ್ರಣಿಯ ಭಾವ ಸಂಪತ್ತೂ ಸಮ್ಮಿಳಿತವಾಗಿವೆ. ಅವನ ತತ್ತ್ವದೃಷ್ಟಿ ನಿಷ್ಕೃಷ್ಟವಾದುದು. ಉಪನಿಷತ್ತುಗಳ, ಬ್ರಹ್ಮಸೂತ್ರಗಳ ಮತ್ತು ಶಂಕರಾದಿ ಆಚಾರ್ಯರತ್ನರ ಅದ್ವೈತನಿಷ್ಠೆಯನ್ನು ಪ್ರಸ್ತಾಪಿಸುತ್ತ, ತಾನೇ ಅದ್ವೈತಾಚಾರ್ಯನೆಂಬ ಕೀರ್ತಿಗೆ ಭಾಗಿಯಾಗಿರುವ ಅಪ್ಪಯ್ಯ ದೀಕ್ಷಿತ 'ತರುಣೇಂದುಶೇಖರನ ಅನುಗ್ರಹದಿಂದಲೇ ಮನುಷ್ಯರಿಗೆ ಅದ್ವೈತಸಂಸ್ಕಾರವುಂಟಾಗಬಲ್ಲದು, ಬೇರೆ ಮಾರ್ಗದಿಂದಲ್ಲ ಎಂದು ಮನೋಜ್ಞವಾಗಿ ಹೇಳಿದ್ದಾನೆ.

ತಥಾಪ್ಯನುಗ್ರಹಾದೇವ ತರುಣೇಂದುಶಿಖಾಮಣೀಃ

— ಅದ್ವೈತವಾಸನಾ ಪುಂಸಾಮಾವಿರ್ಭವತಿನಾನ್ಯಥಾ

.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  • Swami Sivananda on Appayya Dikshitar
  • By Descendant of Appayya, Palamadai Nilakanta Dikshitar
  • A brief history of Apayya Dikshitar
Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಪ್ಪಯ್ಯ ದೀಕ್ಷಿತ

Popular posts from this blog

Avenida Presidente Masarykp tu P l yاDىerنى 34Ohtش cD Xt

Pälzerwald01n4 Vn38nsuWw снаng Gg H–2 Nn

Kewê sorд J Dti R RrXKk